ಮೂಕ ಮನಸ್ಸು (ಲೇಖನ)
ನೆರಳಂತೆ ತಾಯಿಯಾಗಿ,ವಾತ್ಸಲ್ಯದ ತಂಗಿಯಾಗಿ,ಅಕ್ಕರೆಯ ಅಕ್ಕನಾಗಿ, ಬಾಳಬೆಳಗುವ ಸಂಗಾತಿಯಾಗಿ, ಮುದ್ದಿನ ಮಗಳಾಗಿ ಹಾಗೂ ನಲ್ಮೆಯ ಗೆಳತಿಯರಾಗಿ ಮತ್ತು ಕತೆಗಳನ್ನು ಹೇಳುವ ಅಜ್ಜಿಯಾಗಿ ಅಲ್ಲದೇ ಪದಕಟ್ಟಿ ಹಾಡುವ ನೆರೆಹೊರೆಯವರಾಗಿ ಎಲ್ಲಾ ರೀತಿಯ ಪಾತ್ರದಲ್ಲಿ ತಾನು ಬೆರೆತು ಕಾರ್ಯಕ್ಷಮತೆಯಿಂದ ಸೇವಕಿಯಾಗಿ ನಿರ್ವಹಿಸುವ ದಿಟ್ಟ ಮಹಿಳೆ ಹೆಣ್ಣು ಎಂಬುದನ್ನು ಯಾರೂ ಮರೆಯುವಂತಿಲ್ಲ. ಇಂತಹ ಮಹಿಳೆ ಕೇವಲ ಸೇವಕಿಯಷ್ಟೇ ಅಲ್ಲ ತ್ಯಾಗಮಯಿಯೂ ಆಗಿರುತ್ತಾಳೆ. ಅದೇ ಕಾರಣಕ್ಕೆ ಗಂಡ ಮಕ್ಕಳು ಊಟ ಮಾಡಿದ ಮೇಲೆಯೇ ತಾನು ಊಟ ಮಾಡುವುದು.
ಮಹಿಳೆಯರೇ ಮಾಡುವ ಅಡುಗೆ ಪದಾರ್ಥಗಳು ಮಾರಾಟವಾಗಲು ಹೆಣ್ಣಿನಿಂದಲೇ ಜಾಹಿರಾತು ಆಗಬೇಕು. ವಸ್ತುಗಳನ್ನು ತಯಾರಿಸಲು ಹಾಗೂ ಮಾರಾಟ ಮಾಡಲು ಮಾರುಕಟ್ಟೆಗೆ ಹೆಣ್ಣು ಬೇಕು. ಮಾಧ್ಯಮ ವರದಿಗಳನ್ನು ಪ್ರಕಟಿಸಲು ಹೆಣ್ಣೇ ಬೇಕು. ವ್ಯಾಪಾರ ವಹಿವಾಟು ವ್ಯಾಪಕವಾಗಿ ನಡೆಸಲು ಹೆಣ್ಣು ಬೇಕು. ಬರೀ ಕೇವಲ ಹೆಣ್ಣಾದರೆ ಸರಿ, ಆದರೆ ಅವಳ ಮೈ ಅಂಗಾಂಗಗಳ ಪ್ರದರ್ಶಿಸುತ್ತಾ ಬಿನ್ನಾಣದಿಂದ ವೈಯ್ಯಾರದಿಂದ ಬಿಚ್ಚೋಲೆಯಾಗಿ ನರ್ತಿಸಿ ನಟಿಸಬೇಕು. ಆಗ ಮಾತ್ರ ವಸ್ತುಗಳ ವ್ಯಾಪಾರದಲ್ಲಿ ಹೆಚ್ಚಳ ಕಾಣುತ್ತದೆ ಎಂಬ ನಂಬಿಕೆ.
ಆದರೆ ಮಹಿಳೆಯರು ನೋವಲ್ಲಿದ್ದರೂ ವಿನಾಕಾರಣ ಆಡುವ ಆಟಕೆ ವಸ್ತುವಾಗುವರು, ಹಾಡುವ ಗೀತೆಗೆ ಪದವಾಗುವರು, ಹೊಗಳಿಕೆಗೆ, ತೆಗಳಿಗೆಕೆ ಗುರಿಯಾಗುವರು. ಅವರು ಮಾಡಿಲ್ಲದ ಹಾಗೂ ಬೇರೆಯವರ ದಬ್ಬಾಳಿಕೆಗೆ ಬಲಿಯಾದರಂತೂ ನೆರೆಹೊರೆಯವರಿಗೆ ಬಂದು ಬಳಗದವರಿಗೆ ಹಾಗೂ ಮಾಧ್ಯಮದವರಿಗೆ ಮತ್ತು ಬರೆಯುವವರಿಗೆ ಸಿಹಿ ಆದರೆ ನೋಡುಗರಿಗೆ ಓದುಗರಿಗೆ ಕಹಿಯಾದರೂ ನೋಡುವ ಚಪಲವಂತೂ ಕಡಿಮೆಯಾಗುವುದಿಲ್ಲ. ನೋಡಲಾಗದಿದ್ದರೂ ಮಾತಾಡುವುದಂತೂ ನಿಲ್ಲುವುದಿಲ್ಲ.
ಇಲ್ಲಿ ಇನ್ನೂ ಒಂದು ಬಹುಮುಖ್ಯ ಅಂಶವನ್ನು ಗಮನಿಸಲೇಬೇಕು. ಅದು ಶೋಷಣೆ ಕೇವಲ ಗಂಡಿನಿಂದಲೆ ಅಲ್ಲ ಹೆಣ್ಣಿನಿಂದಲೂ ನಡೆಯುವುದನ್ನು ಕಾಣಬಹುದು. ಗಂಡನಾದವನು ಹೆಂಡತಿಯೊಂದಿಗೆ ಪ್ರೀತಿಯಿಂದ ಬೆರೆತು ಪರಸ್ಪರ ಹೊಂದಾಣಿಕೆಯಿಂದ ಬಾಳಬೇಕೆಂದು ಬಯಸುತ್ತಾನೆ. ಆದರೆ ಅಲ್ಲಿ ತಾಯಿ ತನ್ನ ಮಗನನ್ನು ಹೆಂಡತಿಯೊಂದಿಗೆ ಪ್ರೀತಿಯಿಂದ ಬೆರೆಯಲು ಬಿಡುವುದಿಲ್ಲ. ಮನೆಗೆ ಬಂದ ಸೊಸೆಯನ್ನು ಇಂಚಿಂಚಿಗೂ ಹಿಂಡಿ ಚುಚ್ಚು ಮಾತುಗಳಿಂದ ಹಾಗೂ ದೈಹಿಕವಾಗಿಯೂ ಹಿಂಸೆ ಕೊಡುತ್ತಾಳೆ. ಅದು ಸೊಸೆಯ ಮೇಲಿನ ದ್ವೇಷಕ್ಕಿಂತ ಮಗನ ಮೇಲಿನ ಅತಿಯಾದ ಪ್ರೀತಿಯೇ ಕಾರಣವಾಗಿರುತ್ತದೆ ಎಂಬುದು ಎರಡನೆಯ ಮಾತು.
ಯಾವುದೋ ಒಂದು ದಿನ ಮಹಿಳಾ ದಿನಾಚರಣೆ ಆಚರಿಸಿ ಹೆಣ್ಣನ್ನು ದೇವತೆಗಿಂತ ಮಿಗಿಲೆಂದು ಹೊಗಳಿ ಮರುಕ್ಷಣವೇ ಮರೆತುಹೋಗುತ್ತಾರೆ. ಕೇವಲ ಜಾಹಿರಾತು ಸಿನಿಮಾ ವ್ಯವಹಾರದ ಅಸ್ತಿತ್ವಗಳಿಗೆ ಅನಿವಾರ್ಯವಾಗಿ ಹೆಣ್ಣಿನ ಅಗತ್ಯತೆ ಹೆಚ್ಚಾಗಿದೆ. ಆಕೆಗೆ ಮುಕ್ತವಾಗಿ ಸಂವಹನ ನಡೆಸಲು ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ಆಕೆ ಬಂಧನದ ಬಾಹು ಬಂಧಿಯಾಗಿದ್ದಾಳೆ. ಎಲ್ಲವನ್ನೂ ಮೂಕಳಾಗಿಯೇ ಅನುಭವಿಸುತ್ತಾ ಜೀವನವಿಷ್ಟೇ ಎಂಬಂತೆ ಬದುಕು ಸಾಗಿಸುತ್ತಾರೆ.
_ ರಚೀ ನೇಸರ
ಉತ್ತಮ ಸಂದೇಶವುಳ್ಳ ಬರಹ, ಹೆಣ್ಣನ್ನು ಗೌರವಿಸದ ಯಾವುದೇ ನಾಡು ಉದ್ದಾರವಾಗುವುದಿಲ್ಲ, ಹೆಣ್ಣಿಲ್ಲದೆ ಜನನವಿಲ್ಲ, ಹೆಣ್ಣಿಲ್ಲದಿದ್ದರೆ ಶೃಷ್ಠಿಯೇ ಇಲ್ಲ, ನಿಮ್ಮ ಪ್ರತಿಭೆಯನ್ನು ಬಿಡಬೇಡಿ, ಮುಂದುವರೆಸಿ👌👌👌
ReplyDeleteತುಂಬಾ ಒಳ್ಳೆಯ ಮಾತು ಹೇಳಿದಿರಿ ಸರ್. ನಿಮ್ಮ ಪ್ರೋತ್ಸಾಹ ಸಲಹೆ ನಮಗೆ ಶಕ್ತಿ. ಮೂರು ವರ್ಷಗಳ ಹಿಂದೆಯೇ ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. Blog ಅಂತ ಮಾಡಿದಾಗ ಈ ಲೇಖನವನ್ನು ಪಬ್ಲಿಶ್ ಮಾಡ್ದೆ. ನಿಮ್ಮ ಮೆಚ್ಚುಗೆಯ ಮಾತು ನನಗೆ ಇನ್ನೂ ಹೆಚ್ಚಿನ ಶಕ್ತಿಯನ್ನು ತುಂಬಿತು. ಹೃದಯಪೂರ್ವಕ ಧನ್ಯವಾದಗಳನ್ನು ಹೇಳುತ್ತೇನೆ ಸರ್
Delete