ದುಡಿಮೆಯ ಭರದಲ್ಲಿ ಪ್ರೀತಿಯ ಬರ ನೋಡು

ದುಡಿಮೆಯ ಭರದಲ್ಲಿ ಪ್ರೀತಿಯ ಬರ ನೋಡು 

  ಮಕ್ಕಳೊಂದಿಗೆ ತಂದೆ ತಾಯಂದಿರು ಕೂಡಿ ಆಡುವುದೇ ವಿರಳವಾಗಿದೆ ಕಾರಣ ದುಡಿಮೆಯ ಭರದಲ್ಲಿ.
  ಅದಕ್ಕೆಂದೇ ಬೆಳೆದ ಮಕ್ಕಳು ವಯಸ್ಸಾದ ತಂದೆ ತಾಯಿಯರೊಂದಿಗೆ ಬೆರೆಯದೆ ಇವರ ದುಡಿಮೆಯ ಭರದಲ್ಲಿ ವೃದ್ಧಾಶ್ರಮಕ್ಕೆ ಸೇರಿಸಿ ಬಿಡುತ್ತಾರೆ.
  ಇದು ಅನಿವಾರ್ಯವೋ ಕರ್ಮಧಾರೆಯೋ ಎಂದು ಯೋಚಿಸುತ್ತಿರುವಂತೆಯೇ ತಂದೆ ತಾಯಿಯರ ಆಯಸ್ಸು ಮುಗಿದೇಬಿಡುತ್ತೆ. ಅವರ ಅಂತ್ಯ ಸಂಸ್ಕಾರವಷ್ಟೇ ಬಾಕಿ ಉಳಿಯುತ್ತದೆ. ಮತ್ತದೇ ಪರಿಸ್ಥಿತಿ. ಕಾಲ ಚಕ್ರ ಪುನಃ ಮರುಕಳಿಸಿ ಇವರೂ ತನ್ನ ತಂದೆ ತಾಯಿಯರ ಪರಿಸ್ಥಿತಿಯನ್ನು ಅನುಭವಿಸಲೇಬೇಕಾದ ಸಂದರ್ಭ. ಆಗ ತನ್ನರಿವಿಗೆ ಬಂದುದ್ದು ತನ್ನ ತಂದೆ ತಾಯಿಯರನ್ನು ತಾನು ಉದಾಸೀನ ಮಾಡಿದ್ದಕ್ಕೇ ತನಗೀ ಪರಿಸ್ಥಿತಿ ಎಂಬುದು. ಆದರೆ ಆದರಿಸಲು ಅಪ್ಪ ಅಮ್ಮಂದಿರೇ ಇರುವುದಿಲ್ಲ. ತನ್ನ ಆಯಸ್ಸೂ ಇರುವುದಿಲ್ಲ.
ಗೆಳೆಯರೇ ಮುಂದಿನ conclusion ನೀವೇ ಕೊಡಿ.

  ಕಾರಣ ಹುಡುಕಲು ಹೋದರೆ ತಪ್ಪು ಮುಪ್ಪುಗಳ ತಕ್ಕಡಿಯೇ ತೂರಾಡುತ್ತದೆ. ಮಕ್ಕಳೊಂದಿಗೆ ಹೆಚ್ಚು ಕಾಲ ಸ್ನೇಹಿತರಂತೆ ಬೆರೆತರೆ ಇಂತಹ ಪರಿಸ್ಥಿತಿಗಳು ಬರುವ ಸಾಧ್ಯತೆ ತುಂಬಾ ಕಡಿಮೆ ಅಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ, ಬಾಂಧವ್ಯ ಹಾಗೂ ಸಂಬಂಧಗಳು ಕಡಿಮೆಯಾಗುತ್ತಾ ಹೋದರೆ ಮಕ್ಕಳಿಂದ ಸಿಗುವ ಪ್ರತಿಫಲಗಳು ಅಷ್ಟೇ ಶೂನ್ಯತೆಯೇ ಆಗಿರುತ್ತದೆ.

  ಈಗಿನ ಕಾಲದ ಪರಿಸ್ಥಿತಿಯಲ್ಲಿ ದುಡಿಯುವ ಗೋಜು ಅನಿವಾರ್ಯತೆ ಇದೆ. ಅದೂ ದುಡಿಯುವ ಆಸ್ತಿ ಸಂಪತ್ತು ಧನಕನಕಗಳು ಯಾರಿಗಾಗಿ? ಮಕ್ಕಳಿಗಾಗಿಯೇ ಸರಿ. ಆದರೆ ಅವರಿಗೆ ಬಾಂಧವ್ಯದ ಪಾಠ ಹೇಳಿಕೊಡಲು ಬಾಲ್ಯದಿಂದಲೂ ತಾರುಣ್ಯದವರೆಗೆ ಮಾತ್ರ. ಅದು ಅನುಭವದ ಪಾಠವಾದರೆ ಮಾತ್ರವೇ ಅವರಿಗೆ ಕೊನೆಯವರೆಗೂ ಜೀವನದಲ್ಲಿ ಅನ್ವಯಿಸಿಕೊಂಡು ಬಾಳಲು ಹಾಗೂ ಸಂಬಂಧಗಳಿಗೆ ಬೆಲೆ ಗೌರವ ಕೊಡಲು ಸಾಧ್ಯವಾಗುತ್ತದೆ. “ ಗಿಡವಾಗಿ ಬಗ್ಗದ್ದು ಮರವಾದಾಗ ಬಗ್ಗೀತೆ ” ಎಂಬಂತೆ ದೊಡ್ಡವರಾದಾಗ ಬುದ್ಧಿವಂತಿಕೆಯ ಮಾತುಗಳನ್ನು ಹೇಳಿದರೆ ಕೇಳಲು ಕಹಿಯಾಗುತ್ತದೆ.

   ಹೀಗೆ ಮಾಡುವ ತಪ್ಪುಗಳು ತಮ್ಮ ಗ್ರಹಿಕೆಗೆ ಬರುವುದಿಲ್ಲ ಪೋಷಕರಿಗೆ. ಇನ್ನೂ ಒಂದು ಮಾತು ಹೇಳಲು ಇಚ್ಛಿಸುತ್ತೇನೆ. ಮುದ್ದಿನಿಂದ ಸಾಕಿದ ಮಕ್ಕಳೂ ಸಹ ಮನಸ್ಸಿಗೆ ಗುದ್ದು ಕೊಡಬಹುದು. ಆದಕಾರಣ “ ಬೆಳೆಯುವ ಪೈರು ಮೊಳಕೆಯಲ್ಲಿಯೇ ” ಎಂಬಂತೆ ಮಕ್ಕಳನ್ನು ತುಂಬಾ ಮುದ್ದಿನಿಂದ ಅಲ್ಲ ಜಾಗರೂಕತೆಯಿಂದ ಬೆರೆತು ಬೆಳೆಸಬೇಕು.
  ತಾಯಂದಿರು ಧಾರಾವಾಹಿಗಳಲ್ಲಿ ಲೀನವಾಗದೇ
ಅಪ್ಪಂದಿರು ದುಡಿಮೆಯಲ್ಲಿಯೇ ಲೀನವಾಗದೇ
ಕುಟುಂಬದಲ್ಲಿ ಎಲ್ಲಾ ಸದಸ್ಯರೊಂದಿಗೆ ಉಪಸ್ಥಿತಿಯಲ್ಲಿ ಇರಬೇಕು. ಆಗ ಮಾತ್ರ ಒಂದು ಕುಟುಂಬದಿಂದ ಒಂದು ‌ಮುತ್ತು ಆಚೆ  ಬರುವುದು.
ರವಿ ಟಿ ಚೀಳಂಗಿ
D.L.I.Sc., D.Ed.

Comments